Wednesday, May 28, 2014

ಪ್ರಿಯ ಮಿತ್ರರೇ,                                                                                                         ೨೮-೦೫-೨೦೧೪ 
 ನಮಸ್ಕಾರ !                                                                                                              ಬುಧವಾರ, ಬೆಂಗಳೂರು.

ಬಹಳ ದಿನವಾಯಿತು ನಿಮ್ಮೊಂದಿಗೆ ನನ್ನ ವಿಚಾರಗಳನ್ನು ಹಂಚಿಕೊಂಡು !
                 ನನ್ನ ಈ ಹಿಂದಿನ ಬ್ಲಾಗ್ ಪೋಸ್ಟ್ ಮಾಡಿದ ನಂತರ ಇಂದಿನವರೆಗೆ ನಮ್ಮ ದೇಶದಲ್ಲಿ ಏನೆಲ್ಲಾ ಬದಲಾವಣೆ ಆಗಿಹೋಯಿತು ! ಸುಮಾರು ೩೦ ವರ್ಷಗಳ ದೀರ್ಘಾವಧಿಯ ತರುವಾಯ ತನ್ನದೇ ಆದ ಪೂರ್ಣ ಬಹುಮತ ಹೊಂದಿರುವ, "ಸಹಯೋಗಿಗಳ ಬೆಂಬಲ ಎಂಬ ಒಳಸುಳಿಯಲ್ಲಿ ಸಿಕ್ಕಿ ಬಿದ್ದು ಗಟ್ಟಿ ತೀರ್ಮಾನಗಳನ್ನು ತೆಗೆದುಕೊಳ್ಳಲಾರದೆ ಮರುಗುವ ಜರೂರತ್ತು ಇಲ್ಲದ" ಸಶಕ್ತ ಸರಕಾರವೊಂದನ್ನು ಕೇಂದ್ರದಲ್ಲಿ ಸ್ಥಾಪಿಸಲು ಅಗತ್ಯವಿರುವ ನಿರ್ಣಾಯಕ ಜನಾದೇಶವನ್ನು ಈ ದೇಶದ ಮತದಾರ ಪ್ರಭುಗಳು ನೀಡಿದ್ದಾರೆ. ಆಶ್ಚರ್ಯಹುಟ್ಟಿಸುವ ತೆರದಲ್ಲಿ ! ಬೆರಗುಗೊಳಿಸುವ ಪರಿಯಲ್ಲಿ ! ವಿಶ್ವವೇ ನಮ್ಮ ದೇಶದೆಡೆಗೆ ಕಣ್ಣುಹಾಯಿಸುವಂತೆ, ಉತ್ಸುಕತೆಯಿಂದ ನೋಡುವಂತೆ !!!

               ೨೦೧೪ರ ಮಹಾಚುನಾವಣೆಗಳ ವಿದ್ಯಮಾನಗಳು ಮುಸಲಧಾರಾ ಪ್ರವಾಹದೋಪಾದಿಯಲ್ಲಿ ಭೋರ್ಗರೆದು, ಬರಿ ಬಾಯಿಮಾತಿನ ಭಂಡಾಟದ ಅಭ್ಯಾಸ ಮಾಡಿಕೊಂಡಿದ್ದ ಜೊಳ್ಳು-ಪುಳ್ಳೆಗಳೆಲ್ಲಾ ಉದುರಿಹೋದದ್ದಾಯಿತು. ಇವೆಲ್ಲಗಳ ನಡುವಿಂದ ನಿಖರ-ನೇರ ಹಾಗೂ ನಿರ್ದಿಷ್ಟ ನಿಲುವುಗಳನ್ನು ಮತದಾರ ಪ್ರಭುಗಳ ಮುಂದಿಟ್ಟ ಹುದ್ದರಿಗಳಿಗೆ ಮನ್ನಣೆ ದೊರಕಿದೆ. 

ಸ್ನೇಹಿತರೆ, 
               ಬರಿಯ ಬಾಯಿಮಾತಿನಲ್ಲೇ ದೇಶದ ಜನತೆಯನ್ನು ಮರುಳುಗೊಳಿಸಿ, ಅಂಗೈಯಲ್ಲೇ ಅರಮನೆ ತೋರಿಸುತ್ತಾ ಜನಸಮುದಾಯಗಳ ನಡುವೆ ವೈಷಮ್ಯ ಹುಟ್ಟುಹಾಕಿ, ನಿರಂತರ ಪೋಷಿಸಿಕೊಂಡು ಬಂದು ಈ ವೈಷಮ್ಯದ ಬೆಂಕಿಯಲ್ಲೇ ತಮ್ಮ ರೊಟ್ಟಿ ಬೇಯಿಸಿಕೊಳ್ಳುತ್ತಿದ್ದ (ಪಕ್ಷಾತೀತವಾದ) ರಾಜಕೀಯ ನಾಯಕರಿಗೆ ಈ ಚುನಾವಣೆಯ ಪ್ರಚಾರದ ವೈಖರಿ, ವಿಚಾರವು ಹಿಡಿದ ದಿಕ್ಕು ನಿಜಕ್ಕೂ ಒಂದು ಕಲಿಕೆಯ ವಿಷಯವೆನಿಸಿದೆ. ನಾನು ಈವರೆಗೆ ನೋಡಿರುವ ಚುನಾವಣೆಗಳಲ್ಲಿಯೇ ಪ್ರಚಾರವು ಮೊದಲ ಬಾರಿಗೆ "ಅಭಿವೃದ್ಧಿ" ಆಧಾರಿತವಾದ ಧಾಟಿಯಲ್ಲಿ ನಡೆದದ್ದು ಈ ಚುನಾವಣೆಯ ವೈಶಿಷ್ಟ್ಯವೆಂದು ನನಗನಿಸಿದೆ. 

                 ರಾಜಕೀಯ ಪಕ್ಷಗಳು, ವಿಚಾರಧಾರೆಗಳು ದೇಶವೊಂದನ್ನು, ದೇಶವೊಂದರ ಜನಜೀವನವನ್ನು ವಿಕಾಸದೆಡೆಗೆ ಮುನ್ನಡೆಸಬೇಕು. ಜನಗಣಗಳನ್ನು, ಜನಮನಗಳನ್ನು ಏಕಸೂತ್ರಗೊಳಿಸಿ ಜೀವನಮುಖಿಯಾಗಿಸಿ, ಪುರೋಗಾಮಿಯಾಗಿಸಿ, ಬಡವ-ಬಲ್ಲಿದ, ಮೇಲು-ಕೀಳು, ಇತ್ಯಾದಿ ಭಿನ್ನತೆಗಳನ್ನು ನಿವಾರಿಸಿ, ಇಂದಿನಿಂದ ನಾಳೆಗೆ, ನಾಳೆಯಿಂದ ಅದರಾಚೆಗೆ ನಿರಂತರ ವಿಕಾಸದ ಮಾರ್ಗದಲ್ಲಿ ಮುನ್ನಡೆಯಲು ಸ್ಫೂರ್ತಿ ನೀಡಬೇಕು, ಉತ್ಸಾಹ ತುಂಬುವಂತೆ ಇರಬೇಕು. ರಾಷ್ಟ್ರ ಜೀವನದಲ್ಲಿ ಬಹುಕಾಲದಿಂದ ಇಂತಹಾ ಸ್ಫೂರ್ತಿಯ ಸೆಲೆಯೇ ಬತ್ತಿ ಹೋದಂತಹಾ ವಾತಾವರಣ ಏರ್ಪಟ್ಟಿತ್ತು. ಜನಮಾನಸವೂ ಕೂಡಾ ಇಂತಹಾ ವಾತಾವರಣವನ್ನು ತಮ್ಮ ಹಣೆಬರಹವೇನೋ ಎಂದು ಒಪ್ಪಿಕೊಂಡಂತೆ ಕಂಡುಬಂದಿತ್ತು. ಹಲವು ರಾಷ್ಟ್ರವ್ಯಾಪೀ ಆಂದೋಲನಗಳ ಸರಮಾಲೆಗಳ ನಡುವೆಯೂ ಕೂಡಾ ದೇಶದಲ್ಲಿನ ಪರಿಸ್ಥಿತಿಗಳು ಬದಲಾಗುವ ಸೂಚನೆಗಳು ಕಂಡುಬರದೇ ಹೋದಾಗ ಜನತೆಯು ವ್ಯಾಪಕ ನಿರಾಶೆ ಹಾಗೂ ಹತಾಶೆಯ ಚಿಪ್ಪಿನೊಳಗೆ ನಿಶ್ಶಬ್ಧವಾಗಿ ಸರಿದುಕೊಂಡಿತು. ಆದರೆ, ಸೂಕ್ತ ಅವಕಾಶವೊಂದರ ನಿರೀಕ್ಷೆಯಲ್ಲಿದ್ದದ್ದು ಚುನಾವಣಾ ಸಮಯವೂ ಕೊಡಮಾಡುವ ಮತಚಲಾವಣೆಯ ಹಕ್ಕನ್ನು ಭರ್ಜರಿಯಾಗಿಯೇ ಬಳಸಿಕೊಂಡ ಜನತೆ ತನ್ನ ಮನದಾಳದ ಒಳಗೇ ನಿಗಿ-ನಿಗಿಸುತ್ತಿದ್ದ ಅಸಮಾಧಾನವನ್ನು ಹೊರಹಾಕಿದೆ. ಪದೇ ಪದೇ ತನ್ನೆಡೆಗೆ ದುರ್ಭರತೆಯನ್ನೇ  ರಾಚುತ್ತಿದ್ದ ವ್ಯವಸ್ಥೆಯ ಸಂವೇದನಾರಾಹಿತ್ಯತೆಯನ್ನು ಬಲವಾಗಿಯೇ ಕೊಡವಿಹಾಕಿದೆ ಹಾಗೂ ಇದನ್ನು ಸಹಿಸಲಾಗದು ಎಂಬ ಸ್ಪಷ್ಟ-ದಿಟ್ಟ ಸಂದೇಶವನ್ನೇ ರವಾನಿಸಿದೆ. ಮುಂದಿನ ಆಡಲಳಿತಗಾರರಿಗೆಲ್ಲರಿಗೂ ಇದೊಂದು ಎಚ್ಚರಿಕೆಯ ಘಂಟೆ !!!

ಇದು, ಪ್ರಜಾತಂತ್ರದ ವಿಜಯ ! ಬಹುಮತದ ವಿಜಯ ! 

ಅಧಿಕಾರಕ್ಕೆ ಬಂದಿರುವ ನವ-ಸರ್ಕಾರಕ್ಕೆ ಹಾರ್ದಿಕ ಶುಭಾಶಯಗಳು ಹಾಗೂ ದೇಶದ ಎಲ್ಲಾ ಜನವರ್ಗದ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಜನಾಭಿಮುಖೀ ಹಾಗೂ ಜನಸ್ನೆಹೀ ಆಡಳಿತ ನೀಡುವುದು ಸಾಧ್ಯವಾಗಲಿ ಎಂಬ ಹಾರಯಿಕೆ. 

ಈ ನಿಟ್ಟಿನಲ್ಲಿ ಸಮರ್ಥ ನಾಯಕತ್ವದ ಅಗತ್ಯ ಹಾಗೂ ಅನಿವಾರ್ಯತೆಯ ಕುರಿತು ಯೋಚಿಸುತ್ತಿರುವಂತೆಯೇ ವಿಶ್ವ ಸಂವಾದ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳೂ ಆಗಿರುವ ದೆಬ್ ಎ  ಕೆನೆಡಿಯವರ " DREAMS GIVE US HOPE " ಎಂಬ ಕವಿತೆ ನೆನಪಾಗುತ್ತಿದೆ. ನನ್ನ ಮನಸ್ಸಿಗೆ ಬಹಳವಾಗಿ ಮುಟ್ಟಿದ ಈ ಕವಿತೆಯನ್ನು ಕನ್ನಡೀಕರಿಸಲು ಪ್ರಯತ್ನಿಸಿದೆ. ಭಾವಾನುವಾದದ ಮೊದಲ ಪ್ರಯತ್ನದಲ್ಲಿ ಸ್ವಲ್ಪ ಉದ್ದವೇ ಎನಿಸುವ ಮುಕ್ತ-ಛಂದಸ್ಸಿನ ಕವನವೊಂದು ಮೂಡಿಬಂದಿತು. ಅದನ್ನು ನಾಲ್ಕೇ ಸಾಲುಗಳ ಕಗ್ಗದ ರೂಪಕ್ಕಿಳಿಸುವ ಪ್ರಯತ್ನವನ್ನೂ ಮಾಡಿದ್ದೇನೆ. ಇವೆರಡೂ ನಿಮ್ಮ ಮುಂದಿವೆ:- 

 




ಇಷ್ಟವಾಯಿತೇ? ನಿಮ್ಮ ಅನಿಸಿಕೆ-ಹಿಮ್ಮಾಹಿತಿಗಳನ್ನು ಕಾತರದಿಂದ ಎದುರುನೋಡುವೆ. ನಮಸ್ಕಾರ. 


ಡಾ . ಎಮ್ . ಪಿ. ಕಾಮತ್ 
ಅಜೀಮ್ ಪ್ರೇಮ್ ಜೀ ಪ್ರತಿಷ್ಠಾನ, ಬೆಂಗಳೂರು.